ಕೀರ್ತನೆ - 96     
 
ಗೋಪಿಯ ಭಾಗ್ಯವಿದು | ಆ ಪರಮಾತ್ಮನ ಅಪ್ಪಿ ಮುದ್ದಿಡುವುದು ಅಂಬೆಗಾಲಿಡು ಹರಿಕುಣಿದಾಡೈ ತೋ-| ಳಂಬಲಿ ತಾ ಹೊಂಗುಬ್ಬಿಯನು ।। ಅಂಬುಜನಾಭ ನೀನಾನೆಯನಾಡೆಂದು । ಸಂಭ್ರಮದಿಂದ ಮುದ್ದಾಡುವಳೊ ನಿತ್ಯನಿರ್ಮಲನಿಗೆ ನೀರನೆರೆದು ತಂದು । ಎತ್ತಿ ತೊಡೆಯೊಳಿಟ್ಟು ಮುದ್ದಿಸುತ ।। ಸತ್ಯಲೋಕವನಾಳುವ ವಿಧಿಜನಕನ | ಪುತ್ರನೆಂದರಿತು ತಕ್ಕೈಸುವಳೊ ಪಾಲುಗಡಲು ಮನೆಯಾಗಿ ಮೂಲೋಕವ | ಪಾಲಿಸುತಿಪ್ಪ ನಾರಾಯಣನ ॥ ಕಾಲ ಮೇಲೆ ಮಲಗಿಸಿ ಬಟ್ಟಲ ತುಂಬ | ಹಾಲು ಕುಡಿಸಿ ಸಂತೈಸುವಳೊ ಹರಿ ನಿತ್ಯತೃಪ್ತನೆಂದರಿಯದೆ ಹೊನ್ನಿನ | ಹರಿವಾಣದೊಳಗೆ ಮೃಷ್ಟಾನ್ನವನು | ನೊರೆಹಾಲು ಧೃತ-ಸಕ್ಕರೆ ಕೂಡಿಸಿ ಕರೆ-| ಕರೆದು ಉಣಿಸಿ ತೃಪ್ತಿ ಬಡಿಸುವಳೊ ಅಂಗಜಪಿತನಿಗೆ ಮೋಹದಿಂದ ಹೊಸ । ಅಂಗಿಯ ತೊಡಿಸಿ ಟೊಪ್ಪಿಗೆ ಇರಿಸಿ ॥ ಬಂಗಾರದರಳೆಲೆ ಬಿಂದಲಿಗಳನಿಟ್ಟು | ಸಿಂಗರವನು ಮಾಡಿ ನೋಡುವಳೊ ದೃಷ್ಟಿಯು ತಾಗೀತೆಂದಿಟ್ಟು ಅಂಗಾರವ | ತಟ್ಟೆಯೊಳಾರತಿಗಳ ಬೆಳಗಿ || ಥಟ್ಟನೆ ಉಪ್ಪು-ಬೇವುಗಳ ನಿವಾಳಿಸಿ | ತೊಟ್ಟಿಲೊಳಿಟ್ಟು ಮುದ್ದಾಡುವಳೊ ನಮ್ಮಪ್ಪ ರಂಗಯ್ಯ ಅಳಬೇಡವೊ ದೊಡ್ಡ | ಗುಮ್ಮ ಬಂದಿದೆ ಸುಮ್ಮನಿರು ಎನುತ ।। ಅಮ್ಮಿಯನೀಯುತ ಅಮರರನಾಳನ | ರಮ್ಮಿಸಿ ರಮ್ಮಿಸಿ ಮುದ್ದಾಡುವಳೊ ಏಸೊ ಬೊಮ್ಮಾಂಡವ ರೋಮದೊಳಿರಿಸಿದ | ವಾಸುದೇವನನೆತ್ತಿ ಕೊಂಬುವಳೊ || ನಾಶರಹಿತನಾಯುಷ್ಯ ಹೆಚ್ಚಲೆಂದು । ರಾಶಿದೈವಕೆ ತಾ ಬೇಡಿಕೊಂಬುವಳೊ ಮಾಧವ ಬಾ ಮಧುಸೂದನ ಬಾ ಬ್ರ-| ಹ್ಮಾದಿವಂದಿತ ಹರಿ ಬಾ ಯೆನುತ ।। ಆದಿ ಮೂರುತಿ ಶ್ರೀ ಪುರಂದರವಿಠಲನ । ಆದರದಲಿ ಮುದ್ದಾಡುವಳೊ