ಕೀರ್ತನೆ - 72     
 
ಏಕೆ ವೃಂದಾವನವು ಸಾಕು ಗೋಕುಲವಾಸ | ಏಕೆ ಬಂದೆಯೊ ಉದ್ದವಾ? ಸಾಕು ಸ್ನೇಹದ ಮಾತನೇಕ ಮಹಿಮನು ತಾನು । ಆ ಕುಬುಜೆಯನು ಕೂಡಿದ-ಉದ್ಧವಾ ಬಿಲ್ಲು ಬಿಳಿಯಯ್ಯನ ಬೇಟ ನಗೆನುಡಿ ನೋಟ | ಇಲ್ಲದಂತಾಯಿತಲ್ಲ || ಎಲ್ಲರಿಂದಗಲಿಸಿದ ಕ್ರೂರ ಅಕ್ರೂರನವ | ವಲ್ಲಭನ ಒಯ್ದನಲ್ಲ || ಮಲ್ಲರನು ಮರ್ದಿಸುತ ಮಾವ ಕಂಸನ ಕೊಂದ | ಫುಲ್ಲನಾಭನ ತಂದು ತೋರೈ-ಉದ್ಧವಾ ಅನುದಿನದೊಳಾದರಿಸಿ ಅಧರಾಮೃತವನಿತ್ತು । ಇನಿದಾದ ಮಾತುಗಳಲಿ | ಮನದ ಮರ್ಮವ ತಿಳಿದ ಮನಸಿಜಪಿತನ ಸಖವು । ಮನಸಿಜನ ಕೇಳಿಯಲ್ಲಿ | ಕನಸಿನಲಿ ಕಂಡ ತೆರನಾಯಿತಾತನ ಕಾಂಬು | ವನಕ ಬದುಕುವ ಭರವಸೆ ಹೇಳು-ಉದ್ಧವಾ ಕರುಣನಿಧಿಯೆಂಬುವರು ಕಪಟನಾಟಕದರಸು | ಸರಸ ವಿರಸವ ಮಾಡಿದ || ಸ್ಮರಿಸಿದವರನು ಕಾಯ್ವ ಬಿರುದುಳ್ಳ ಸಿರಿರಮಣ । ಮರೆದು ಮಧುರೆಯ ಸೇರಿದ || ಪರಮಭಕ್ತರ ಪ್ರಿಯ ಪುರಂದರವಿಠಲನ | ನೆರೆಗೂಡಿಸೈ ಕೋವಿದ-ಉದ್ಧವಾ