ಹೊಸಪರಿಯೊ-ರಂಗ-ಹೊಸ ಪರಿಯೊ ।
ಶಶಿಧರವಂದ್ಯನೆ ಕುಸುಮಜಜನಕ
ಬೊಮ್ಮಗೆ ನೀ ಪರಬೊಮ್ಮನಾದೆಯೊ ರಂಗ |
ತಮ್ಮಗೆ ನೀ ಮತ್ತೆ ತಮ್ಮನಾದೆಯೊ ರಂಗ ||
ಮಗನ ಮಗಗೆ ಮೊಮ್ಮಗನಾದೆಯೊ ರಂಗ |
ಮಗನ ಮಗಳ ನೀ ಮದುವೆಯಾದೆಯೊ ರಂಗ
ಮಾವಗೆ ನೀ ಮತ್ತೆ ಮಾವನಾದೆಯೊ ರಂಗ !
ಮಾವನ ಮಗಳ ನೀ ಮದುವೆಯಾದೆಯೊ ರಂಗ ||
ಭಾವಗೆ ನೀ ಮತ್ತೆ ಭಾವನಾದೆಯೊ ರಂಗ |
ಭಾವಜವೈರಿಗೆ ಸಖನಾದೆಯೊ ರಂಗ
ಅತ್ತೆಯ ಅರ್ಥಿಯಿಂದಾಳಿದೆಯೋ ರಂಗ |
ಅತ್ತೆಯ ಮಗಳ ನೀ ಮದುವೆಯಾದೆಯೊ ರಂಗ ||
ಮತ್ತೊಬ್ಬರಿಗುಂಟೆ ಈ ಪರಿ ಮಹಿಮೆಯು ।
ಕರ್ತೃ ಶ್ರೀ ಪುರಂದರವಿಠಲನಿಗಲ್ಲದೆ