ಕೀರ್ತನೆ - 42     
 
ರಂಗನ ನೋಡಿರೆ ರಾಯ ಚೆನ್ನಿಗ ನರ- ಸಿಂಗನ ದೇವಕಿದೇವಿಯ ಸುತನ ಥಳಿಥಳಿಸುವ ನಗುಮೊಗದ ಚೆನ್ನಿಗನ । ಪೊಳೆವ ವಜ್ಜರದ ಕಿರೀಟವಿಟ್ಟವನ ॥ ಪ್ರಳಯ ಕಾಲದಿ ವಟಪತ್ರಶಯನನ | ನಳಿನಭವನ ನಾಭಿಯಲ್ಲಿ ಪೆತ್ತವನ ಆಣಿಮುತ್ತಿನ ದುಂಡು ಮಕರಕುಂಡಲನ | ಭಾನುಪ್ರಭೆಯ ಭುಜಕೀರ್ತಿಯೊಪ್ಪುವನ ॥ ಕಾಣಿಸೆ ಅಪರಂಜಿ ಕಡಗ ಕಂಕಣ ಹೊಸ | ಮಾಣಿಕದುಂಗುರವಿಟ್ಟು ಮೆರೆವನ ಕಮಲಾಮನೋಹರ ಕಮಲಜ ಪಿತನ | ರಮಣಿಗೆ ಪಾರಿಜಾತವನೇ ತಂದವನ | ಕ್ರಮದಿಂದ ಭಸ್ಮಾಸುರನ ಕೊಂದವನ | ರಮೆಯಾಣ್ಮನೆನ್ನಲು ಇಹಪರವೀವನ ಶುಕ್ರವಾರ ಪುಲಕು ಪೂಜೆಗೊಂಬವನ | ಸಕ್ಕರೆ-ಹಾಲು-ಬೆಣ್ಣೆಯ ಮೆಲ್ಲುವವನ ॥ ಗಕ್ಕನೆ ಸುರರಿಗೆ ಅಮೃತವಿತ್ತವನ | ರಕ್ಕಸದಲ್ಲಣ ರಾವಣಾಂತಕನ ಪಾಪವಿನಾಶದಿ ಸ್ನಾನವ ಮಾಡಿ | ಪಾಪಗಳೆಲ್ಲ ಬೇಗನೆ ಬಿಟ್ಟು ಓಡಿ ॥ ಈ ಪರಿಯಿಂದಲಿ ಮೂರುತಿ ನೋಡಿ | ಶ್ರೀಪತಿ ಪುರಂದರವಿಠಲನ ಪಾಡಿ