ಕೀರ್ತನೆ - 32     
 
ಹೇಗೆ ಉದ್ಧಾರ ಮಾಡುವನು - ಶ್ರೀ ಹರಿ | ಹೀಗೆ ದಿನಗಳೆದುಳಿದವನ ರಾಗದಿಂದಲಿ ಭಾಗವತರಿಗೆ । ಬಾಗದಲೆ ತಲೆ ಹೋಗುವಾತನ ಅರುಣೋದಯಲೆದ್ದು ಹರಿಯೆನ್ನದಲೆ ಗೊಡ್ಡು | ಹರಟೆಯಲಿ ಹೊತ್ತು ಏರಿಸಿದವನ ।। ಸಿರಿ ತುಲಸಿಗೆ ನೀರನೆರೆದು ನಿರಂತರ | ಧರಿಸದೆ ಮೃತ್ತಿಕೆ ತಿರುಗುತಲಿಪ್ಪನ ॥ ಮರೆತು ಸ್ನಾನ ಮನೆಮನೆ ತಿರುಗುತ ಹೊಟ್ಟಿ | ಕೆರೆದಾಗ ಬೇಯಿಸಿಕೊಂಡು ತಿನ್ನುವನ ಗುರುಹಿರಿಯರ ಸೇವೆ ಜರೆದು ನಿರಂತರ | ಪರನಿಂದೆಯ ಮಾಡಿ ನಗುತಿಹನ || ಪರಹೆಣ್ಣು ಪರಹೊನ್ನು ಕರಗತವಾಗಲೆಂದು | ಪರಲೋಕ ಭಯಬಿಟ್ಟು ತಿರುಗುವನ ॥ ತರುಣಿ ಮಕ್ಕಳನು ಇರದೆ ಪೋಷಿಸಲೆಂದು | ಪರರ ದ್ರವ್ಯ ಕಳವು ವಂಚನೆ ಮಾಳ್ವನ ನಡೆಯಿಲ್ಲ ನುಡಿಯಿಲ್ಲ ಪಡೆಯಲಿಲ್ಲ ಪುಣ್ಯವ । ಬಿಡವು ನಿನ್ನ ಪಾಪಕರ್ಮಗಳೆಂದಿಗು | ಸಡಲಿದಾಯುಷ್ಯವು ಕಡೆಗೂ ಸ್ಥಿರವೆಂದು । ಕಡುಮೆಚ್ಚಿ ವಿಷಯದೊಳಿಪ್ಪನ || ಒಡೆಯ ಶ್ರೀಪುರಂದರ ವಿಠಲರಾಯನ | ಅಡಿಗಳ ಪಿಡಿಯದೆ ಕಡೆಗೂ ಕೆಟ್ಟವನ