ಕೀರ್ತನೆ - 31     
 
ಹೇಗೆ ಅರ್ಚಿಸಲಿ ಮೆಚ್ಚಿಸಲಿ ನಿನ್ನ ನಾಗಶಯನ ನಾರದವಂದಿತನೆ ದೇವಾ ಮಂಗಳಾಭಿಷೇಕಕೆ ಉದಕ ತರುವೆನೆನೆ ಗಂಗೆಯ ಅಂಗುಟದಿ ಪಡೆದಿಹೆಯೊ || ಸಂಗೀತ ಕೀರ್ತನೆ ಪಾಡುವೆನೆಂದರೆ ಹಿಂಗದೆ ತುಂಬುರ ನಾರದರು ಪಾಡುವರೊ ಪುಷ್ಪವ ತಂದು ನಿನಗರ್ಪಿಸುವೆನೆಂದರೆ ಪುಷ್ಪ ಫುಲ್ಲಯಿಸಿದೆ ಹೊಕ್ಕುಳಲಿ ॥ ಮುಪ್ಪತ್ತು ಮೂರ್ಕೋಟಿ ದೇವತೆಗಳು ನಿನ ಗೊಪ್ಪಿಸೆ ನೈವೇದ್ಯ ನಿತ್ಯತೃಪ್ತನು ನೀನು ಕೋಟಿಸೂರ್ಯರ ಕಾಂತಿ ಮಿಗಿಲಾದವನಿಗೊಂದು ಮೋಟು ದೀವಿಗೆ ಬೆಳಗೆ ಬೆಳಕಹುದೆ? ।| ಸಾಟಿಗಾಣದ ಸಿರಿ ಉರದೊಳು ನೆಲಸಿರೆ ಪೋಟುಗಾಸನು ಎಂತು ಕಾಣಿಕೆಯಿಡಲಯ್ಯ ಹಾಸಿಗೆಯನು ನಿನಗೆ ಹಾಸುವೆನೆಂದರೆ ಶೇಷನ ಮೈಮೇಲೆ ಪವಡಿಸಿಹೆ ॥ ಬೀಸಣಿಕೆಯ ತಂದು ಬೀಸುವೆನೆಂದರೆ ಆಸಮೀರಣ ಚಾಮರವ ಬೀಸುತಿಹನೋ ನಿತ್ಯ ಗುಣಾರ್ಣವ ನಿಜಸುಖ ಪರಿಪೂರ್ಣ ಸತ್ತುಚಿತ್ತಾನಂದ ಸನಕಾದಿ ವಂದ್ಯ || ಮುಕ್ತಿದಾಯಕ ನಮ್ಮ ಪುರಂದರ ವಿಠಲನು ಭಕ್ತಿಪ್ರಿಯನು ಎಂದು ಭಜಿಸಿ ಕೊಂಡಾಡುವೆ