ಹರಿಯೆಂಬ ನಾಮಾಮೃತ ರುಚಿಕರವೆಲ್ಲ
ಪರಮಭಕ್ತರಿಗಲ್ಲದೆ – ಮಿಕ್ಕ -1
ಅರಿಯದ ಕಡುಮೂರ್ಖ ಮನುಜರಿಗೆಲ್ಲ ತಾ
ಹರುಷವಾಗಬಲ್ಲದೆ?
ಅಂದುಗೆ ಅರಳೆಲೆಯಿಟ್ಟರೆ ಕೋಡಗ
ಕಂದನಾಗಬಲ್ಲದೆ? ।
ಹಂದಿಗೆ ತುಪ್ಪ-ಸಕ್ಕರೆ ತಿನ್ನಿಸಲು ಗ-
ಜೇಂದ್ರನಾಗಬಲ್ಲದೆ? ||
ಇಂದು ಪೂರ್ಣಕಳೆಯೊಳು ತಾನು ತೋರಲು
ಅಂಧ ನೋಡಬಲ್ಲನೆ? –ನಮ್ಮ- |
ಇಂದಿರೆಯರಸನ ನಾಮದ ಮಹಿಮೆಯ
ಮಂದಜ್ಞಾನಿ ಬಲ್ಲನೆ
ಪರಿಪರಿ ಬಂಗಾರವಿಟ್ಟರೆ ದಾಸಿ ತಾ
ಅರಸಿಯಾಗಬಲ್ಲಳೆ? ।
ಭರದಿಂದ ಶ್ವಾನನ ಬಾಲವ ತಿದ್ದಲು
ಸರಳವಾಗಬಲ್ಲದೆ? ।
ಉರಗಗೆ ಕ್ಷೀರವನೆರೆಯಲು ಅದು ತನ್ನ
ಗರಳವ ಬಿಡಬಲ್ಲದೆ? ||
ಭರದಿಂದ ನೀಲಿಯ ಕರದಿಂದ ತೊಳೆಯಲು
ಕರಿದು ಹೋಗಬಲ್ಲದೆ? ।
ಮೋಡಕೆ ಮಯೂರ ಕುಣಿವಂತೆ ಕುಕ್ಕುಟ
ನೋಡಿ ಕುಣಿಯಬಲ್ಲದೆ? ।
ಗೋಡೆಗೆ ಎದುರಾಗಿ ನಾಟ್ಯವಾಡಲು
ನೋಡಿ ಸುಖಿಸಬಲ್ಲದೆ? ॥
ಹಾಡಿನ ಕುಶಲತೆ ಬಧಿರನು ತಾ ಸವಿ-
ಮಾಡಿ ಕೇಳಬಲ್ಲನೆ? ।
ರೂಢಿಗೊಡೆಯ ನಮ್ಮ ಪುರಂದರ ವಿಠಲನ
ಮೂಢಜ್ಞಾನಿ ಬಲ್ಲನೆ
Music
Courtesy:
ಸ್ಥಲ -
ಕೀರ್ತನೆ
ವಿಷಯ -
ಶ್ರೀ ಹರಿ ಸಂಕೀರ್ತನೆ