ಕೀರ್ತನೆ - 18     
 
ನಿನಗಾರು ಸರಿಯಿಲ್ಲ ಎನಗನ್ಯ ಗತಿಯಿಲ್ಲ ಎನಗೂ ನಿನಗೂ ನ್ಯಾಯ ಹೇಳುವರಿಲ್ಲ ಒಂದೇ ಗೂಡಿನೊಳು ಒಂದು ಕ್ಷಣವಗಲದೆ ಎಂದೆಂದು ನಿನ್ನ ಪಾದ ಪೊಂದಿರುವೆ ॥ ಬಂದ ವಿಷಯಂಗಳಿಗೆ ಎನ್ನನೊಪ್ಪಿಸಿಕೊಟ್ಟು ಅಂಧಕನಂತೆ ನೀ ನೋಡುವುದುಚಿತವೆ ಪರಸತಿಗಳುಪಿರೆ ಪರಮ ಪಾಪಿಷ್ಠನೆಂದು ಪರಿಪರಿ ನರಕವ ನೇಮಿಸುವೆ ॥ ಪರಸತಿಯರ ಒಲುಮೆ ನಿನಗೆ ಒಪ್ಪಿತು ದೇವ ದೊರೆತನಕಂಜಿ ನಾ ಶರಣೆಂದೆನಲ್ಲದೆ ನಿನ್ನಾಜ್ಞೆಯವ ನಾನು ನಿನ್ನ ಪ್ರೇರಣೆಯಿಂದ ಅನಂತವಿಧದ ಕರ್ಮವ ಮಾಡಿದೆ || ಎನ್ನಪರಾಧಗಳೆಣಿಸಲಾಗದು ದೇವ ಪನ್ನಗ ಶಯನ ಶ್ರೀಪುರಂದರ ವಿಠಲ