ನಡೆದು ಬಾ ನಾಲ್ವರಿದ್ದೆಡೆಗೆ ಎನ್ನಯ ನಿನ್ನ
ತೊಡರ ನಿರ್ಣಯಿಸಿಕೊಂಬೆನು ತೋಯಜಾಕ್ಷ
ಆದಿಯಲ್ಲಿ ಎನ್ನ ತಾತ ಮುತ್ತಾತರು
ಪಾದ ಸೇವೆಯ ಮಾಡಿ | ಹಲವು ಕಾಲ ॥
ಸಾಧಿಸಿದರ್ಥವ ಸಲೆ ಎನ್ನ ಜೀವಕ್ಕೆ
ಆಧಾರವಾದುದನು ಏಕೆ ಕೊಡಲೊಲ್ಲೆ
ಸಾಲವ ಕೇಳಲು ಸಟೆ ಟೌಳಿಯನಾಡಿ
ಕಾಲವ ಕಳೆವೆ ನೀ ಕಪಟದಿಂದ ॥
ಮೇಲಿನ ವಿಬುಧರು ಮೆಚ್ಚುವಂತೆ ನಿನ್ನ
ಕಾಲಿಗೆ ಎನ್ನ ಕೊರಳ ಕಟ್ಟಿಕೊಳ್ಳುವೆ
ಸನಕಾದಿ ಮುನಿಗಳ ಸಾಕ್ಷಿಯಿಂದಲಿ ಎನ್ನ
ಮನಕೆ ಬಪ್ಪಂತೆ ನೀ ಘನ ನಂಬುಗೆಯಿತ್ತೆ
ಅನುಮಾನವೇಕೆ ದಯಪಾಲಿಸೈ ಈಗ
ವನಜಾಕ್ಷ ತಂದೆ ಪುರಂದರವಿಠಲ