ಏಳು ನಾರಾಯಣ ಏಳು ಲಕ್ಷ್ಮೀರಮಣ
ಏಳು ಶ್ರೀಗಿರಿಯೊಡೆಯ ಶ್ರೀವೆಂಕಟೇಶ
ಕಾಸಿದ್ದ ಹಾಲನ್ನು ಕಾವಡಿಯೊಳ್ ಹೆಪ್ಪಿಟ್ಟು
ಲೇಸಾಗಿ ಕಡೆದು ಹೊಸ ಬೆಣ್ಣೆ ಕೊಡುವೆ
ಶೇಷಶಯನನೆ ಏಳು ಸಮುದ್ರ ಮಥನವ ಮಾಡು
ದೇಶ ಕೆಂಪಾಯಿತು ಏಳಯ್ಯ ಹರಿಯೇ
ಅರುಳು ಮಲ್ಲಿಗೆ ಜಾಜಿ ಪರಿಮಳದ ಪುಷ್ಪಗಳ
ಸುರರು ತಂದಿದ್ದಾರೆ ಬಲು ಭಕುತಿಯಿಂದ
ಅರವಿಂದನಾಭ ಸಿರಿವಿಧಿಭವಾದಿಗಳೊಡೆಯ
ಪಿರಿದಾಗಿ ಕೋಳಿ ಕೂಗಿತೇಳಯ್ಯ ಹರಿಯೇ
ದಾಸರೆಲ್ಲರು ಬಂದು ಧೂಳಿದರ್ಶನಕೊಂಡು
ಲೇಸಾಗಿ ತಾಳ ದಂಡಿಗೆಯ ಪಿಡಿದು
ಶ್ರೀಶ ಪುರಂದರ ವಿಠಲರಾಯ ನಿಮ್ಮ ಪಾದವನು
ಲೇಸಾಗಿ ಪೊಗಳುವರು ಹರಿಯೇ