ಆವಪರಿಯಲಿ ನಿನ್ನನೊಲಿಸಿ ಮೆಚ್ಚಿಪ ವಿಧವು |
ಅಣು ಮಾತ್ರ ತೋರದಲ್ಲ
ದೇವ ದೇವೇಶ ನೀನೆಂದು ನಂಬಿರಲು
ಕೃಪಾವಲೋಕನದಿ ಸಲಹೊ-ದೇವ
ಫಣಿರಾಜನಾಸನದಿ ಮಲಗಿದವಗೆ
ಅರಿವೆಯಾಸನವೆಂತು ನಾ ಹಾಸಲಿ |
ಘನವಾದ ಗಂಗೆಯನು ಪಡೆದವಗೆ ಕಲಶ
ನೀರನದೆಂತು ಮೈಗೆರೆಯಲಿ ||
ತನುವಿನಾ ಪರಿಮಳವು ಘಮಘಮಿಪನಿಗೆ
ಸುಚಂದನವೆಂತು ನಾ ಪೂಸಲಿ ।
ಅನವರತ ನಾಭಿಯೊಳು ಶತಪತ್ರವಿಹಗೆ
ಮಿಕ್ಕಿನ ಪೂವ ಮುಡಿಸಲೆಂತೈ-ದೇವ
ಸುರುಚಿರೋಜ್ವಲ ಪೀತವಾಸನಿಗೆ ಉಡುಗೊರೆಯ
ಅರಿವೆ ಏನನು ಪೊದಿಸಲಿ?
ವರ ಕೌಸ್ತುಭವು ಕೊರಳಿನೊಳಗೆ ಇಪ್ಪವಗೆ
ಆಭರಣವಾವುದ ತೊಡಿಸಲಿ?
ತರಣಿಶತ ಕೋಟಿ ತೇಜನ ಮುಂದೆ ಹೇಗೆ ನಾ
ಪೆರತೊಂದು ದೀಪವಿಡಲಿ?
ನೆರಹಿದಾ ಫಣಿಪತಿಯ ಸ್ತೋತ್ರದೂರನ
ನಾನು ಸ್ಮರಿಪೆನಂತಯ್ಯ ದೇವ, ದೇವ
ವನಜಜಾಂಡದ ಕೋಟಿಯುದರಂಗೆ ಆವುದನು
ಉಣಿಸಿ ತೃಪ್ತಿಯ ಮಾಡಲಿ? ।
ಅನಿಮಿಷರಿಗಮೃತವನ್ನೆರೆದವನ ತೃಷೆಯ
ನೀರಿನೊಳೆಂತು ಸಂತವಿಡಲಿ? ॥
ವಿನತೆಯಾತ್ಮಜಪಕ್ಷದನಿಲನಿರೆ ಬೇರೆ
ಬೀಸಣಿಗೆಯಿನ್ನೇಂ ಬೀಸಲಿ |
ಅಣುರೇಣು ಪರಿಪೂರ್ಣ ಮೂರುತಿಗೆ
ನಾ ಪ್ರದಕ್ಷಿಣೆಯೆಂತು ಸುತ್ತಿ ಬರಲಿ-ದೇವ
ಮಿಗೆ ಫಣಿಯ ಫಣದಾತಪತ್ರ ವಿರುವವಗೆ
ನೆರಳಿಗೆ ಕೊಡೆಯನೇಂ ಪಿಡಿಯಲಿ ।
ಪಗಲಿರುಳು ಸಾಮಗಾನಪ್ರಿಯನ ಮುಂದೆ
ಗೀತಗಳ ನಾನೇಂ ಪಾಡಲಿ ||
ಜಗವರಿಯೆ ಲಕ್ಷ್ಮಿದೇವಿಪತಿಗೆ ಎಷ್ಟು ಹೊನ್ನುಗಳ
ದಕ್ಷಿಣೆಯ ಕೊಡಲಿ |
ನಿಗಮ ತತಿ ಕಾಣದ ಮಹಾಮಹಿಮನನು
ನಮಿಪ ಬಗೆಯ ನಾನರಿವೆನೆಂತೈ-ದೇವ
ಒಲಿಸುವುದನರಿಯೆ ಮೆಚ್ಚಿಸುವ ಬಗೆಯನರಿಯೆ
ಹೊಗಳುವ ಹೊಲಬನ್ನರಿಯೆನು |
ತಿಳಿದುದಿಲ್ಲವು ಷೋಡಶೋಪಚಾರದ
ಪೂಜೆಗಳಲೊಂದುಪರಿಯಾದರೂ ||
ನೆಲೆಯ ಕಾಣೆನು ನಿಗಮ ಶಾಸ್ತ್ರ ನವವಿಧ
ಭಕ್ತಿಯೊಳಗೊಂದು ಬಗೆಯಾದರೂ ।।
ಅಳಿಲು ಸೇವೆಯನೊಪ್ಪಿಕೊಂಡು ಸಲಹೈ
ಪುರಂದರ ವಿಠಲನೇ ಸ್ವಾಮಿ-ಪ್ರೇಮಿ
Music
Courtesy:
ಸ್ಥಲ -
ಕೀರ್ತನೆ
ವಿಷಯ -
ಶ್ರೀ ಹರಿ ಸಂಕೀರ್ತನೆ